ಶಕ್ತಿನಗರ, ಜುಲೈ 5 : ಮಂಗಳೂರಿನ ಶಕ್ತಿ ನಗರದಲ್ಲಿರುವ ಶಕ್ತಿ ಪೂರ್ವಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸುವ ಮೂಲಕ ವನಮಹೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೆಲ್ಲರೂ ಶಿಕ್ಷಕರ ಮಾರ್ಗದರ್ಶನದಲ್ಲಿ ವನ ಸಂರಕ್ಷಣೆಯ ಕುರಿತಾದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯನ್ನು ಮಾಡಿ ಜನರಲ್ಲಿ ವನ ಸಂರಕ್ಷಣೆಯ ಜಾಗೃತಿ ಮೂಡಿಸಿದರು.
ಮೆರವಣಿಗೆಯಲ್ಲಿ ಪೇರಳೆ, ನಿಂಬೆ, ನೇರಳೆ ಮತ್ತಿತರ ಗಿಡಗಳನ್ನು ನೆರೆದಿದ್ದ ಸಾರ್ವಜನಿಕರಿಗೆ ಹಾಗೂ ಪೋ?ಕರಿಗೆ ವಿತರಿಸಲಾಯಿತು.
ಕಾಲಕಾಲಕ್ಕೆ ಸರಿಯಾಗಿ ಮಳೆಯಾಗಲು, ನಮಗೆ ಉಸಿರಾಡಲು ಶುದ್ಧ ಗಾಳಿ ಸಿಗಲು, ಹೂವು ಹಣ್ಣು ನೀಡಲು, ನೆರಳು ಕೊಡಲು ಮತ್ತು ಪಕ್ಷಿಗಳಿಗೆ ಗೂಡು ಕಟ್ಟಲು ಮರಗಿಡಗಳು ನಮಗೆ ಬೇಕು. ಆದ್ದರಿಂದ ನಾವೆಲ್ಲಾ ಮರಗಿಡಗಳನ್ನು ನೆಡೋಣ ಎಂದು ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಬಬಿತಾ ಸೂರಜ್ ಅವರು ಮಕ್ಕಳಿಗೆ ತಿಳಿಹೇಳಿದರು.
ಮಕ್ಕಳಿಂದ ಬೀಜ ಉಂಡೆಗಳ (seed balls) ತಯಾರಿಕೆ ಮಾಡಿರುವುದು ವಿಶೇಷವಾಗಿತ್ತು. ಈ ಉಂಡೆಗಳು, ಬೀಜ ಮತ್ತು ಮಣ್ಣಿನ ಮಿಶ್ರಣವನ್ನು ಒಳಗೊಂಡಿದ್ದು, ಅವನ್ನು ಪಾಲಕರಿಗೆ ವಿತರಿಸಲಾಯಿತು. ಮಕ್ಕಳು ಶಾಲೆಯ ಪರಿಸರದಲ್ಲಿ ಗಿಡಗಳನ್ನು ನೆಟ್ಟರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ ಕೆ. ಸಿ. ನಾೖಕ್, ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ., ಮತ್ತು ಪ್ರೀಸ್ಕೂಲ್ ಸಂಯೋಜಕಿ ಸುಷ್ಮಾ ಸತೀಶ್ ಉಪಸ್ಥಿತರಿದ್ದರು.