ಮಂಗಳೂರು: ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಶಾಲೆ, ಕಾಲೇಜಿನಲ್ಲಿ ಶಿಕ್ಷಣದ ಜತೆಗೆ ಜೀವನ ಮೌಲ್ಯ, ಸಂಸ್ಕಾರ, ಸಂಸ್ಕೃತಿಗೆ ಆದ್ಯತೆ ನೀಡಿ ಬೋಧಿಸುತ್ತಿರುವುದು ಪ್ರಶಂಸನೀಯ. ಸುಸಜ್ಜಿತ ಹಾಗೂ ಗುಣಮಟ್ಟದ ಮೂಲಸೌಲಭ್ಯ ಹೊಂದಿರುವ ಶಕ್ತಿ ಶಿಕ್ಷಣ ಸಂಸ್ಥೆ ಭವಿಷ್ಯದಲ್ಲಿ ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಹೇಳಿದರು.
ಶಕ್ತಿನಗರದ ಶಕ್ತಿ ಸ್ಕೂಲ್ ಕ್ಯಾಂಪಸ್‌ನಲ್ಲಿ ಶುಕ್ರವಾರ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಡಾ.ಕೆ.ಸಿ. ನಾೖಕ್ ಅವರು ತನ್ನ 78 ನೇ ವಯಸ್ಸಿನಲ್ಲಿ ಶಕ್ತಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಕಲಿಕೆಯ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಅಪೂರ್ವ ಅವಕಾಶ ಒದಗಿಸಿಕೊಟ್ಟಿದ್ದಾರೆ. ಅವರದ್ದು ಲಾಭದ ಉದ್ದೇಶವಲ್ಲ. ಶಕ್ತಿ ಶಿಕ್ಷಣ ಸಂಸ್ಥೆ ಅಲ್ಪ ಅವಧಿಯಲ್ಲೇ ಅಪಾರ ಸಾಧನೆ ಮಾಡಿರುವುದು ಅವರ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಶಕ್ತಿ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮತ್ತು ಏಳಿಗೆಗೆ ಸಹಕಾರ ನೀಡಿದವರ ಉಪಕಾರ ಸ್ಮರಣೆ ಅವರ ದೊಡ್ಡಗುಣವಾಗಿದೆ ಎಂದರು.
ಜೀವನದಲ್ಲಿ ಪ್ರೀತಿಯಿಂದ ಯಶಸ್ಸು ಮತ್ತು ಸಂಪತ್ತು ಗಳಿಸಬಹುದು. ವಿದ್ಯಾರ್ಥಿಗಳು ಯಾವುದೇ ಕೀಳರಿಮೆ ಹೊಂದದೆ ಆಸಕ್ತಿಯ ಕ್ಷೇತ್ರದಲ್ಲಿ ಸಾಧನೆಗೆ ಮುಂದಾಗಬೇಕು. ಸಾಮಾಜಿಕವಾಗಿ ಪರಿಶುದ್ಧ ಭಾಷೆ ಮಾತನಾಡುವ ಮೂಲಕ ತಮ್ಮತನ ಉಳಿಸಿಕೊಳ್ಳಬೇಕು. ಶಕ್ತಿ ಶಿಕ್ಷಣ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶಾತಿ ಹೆಚ್ಚಬೇಕು ಎಂದು ಅವರು ಹೇಳಿದರು.
ಶಕ್ತಿ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಡಾ.ಕೆ.ಸಿ. ನಾೖಕ್ ಮಾತನಾಡಿ, ಶಕ್ತಿನಗರದಲ್ಲಿ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ವಸತಿ ಶಾಲೆ, ಪದವಿಪೂರ್ವ ಕಾಲೇಜು ಎಲ್ಲರ ಸಹಕಾರದಿಂದ ಸ್ಥಾಪನೆಗೊಂಡು ಹಂತ ಹಂತವಾಗಿ ಬೆಳೆದು ಬಂದಿದೆ. ಸಂಸ್ಥೆಯಲ್ಲಿ ಕಳೆದ ವರ್ಷದ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದರೆ, ಈ ಬಾರಿ 1500 ಕ್ಕೂ ಹೆಚ್ಚು ಮಕ್ಕಳು ದಾಖಲಾತಿ ಆಗಿದ್ದಾರೆ. 250 ಕ್ಕೂ ಹೆಚ್ಚು ಮಂದಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕರು, ಶಾಲೆ ಜತೆ ಜತೆಯಾಗಿ ಅಭಿವೃದ್ಧಿಗೊಳ್ಳಬೇಕು ಎಂಬುದು ನಮ್ಮ ಆಶಯ ಎಂದರು.
ಇಂದಿನ ಡಿಜಿಟಲ್ ಜಗತ್ತಿನಲ್ಲಿ ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವುದು, ಹಿಡಿತಕ್ಕೆ ಪಡೆದುಕೊಳ್ಳುವುದು ಕಷ್ಟದ ಕೆಲಸ. ಈ ನಿಟ್ಟಿನಲ್ಲಿ ವಸತಿ ಶಾಲೆ ಆರಂಭಿಸಲಾಗಿದೆ. ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವ ಕೆಲಸವನ್ನು ಶಕ್ತಿ ವಸತಿ ಶಾಲೆ ಮಾಡುತ್ತಿದೆ. ಸಂಸ್ಥೆಯಿಂದ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ತೆರಳುವಂತೆ ಆದ್ಯತೆ ನೀಡಲಾಗುತ್ತಿದೆ ಎಂದು ಡಾ. ಕೆ.ಸಿ. ನಾೖಕ್ ತಿಳಿಸಿದರು.
ಶಕ್ತಿ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಸಂಜೀತ್ ನಾೖಕ್ ಮಾತನಾಡಿ, ಅನೇಕ ಜನರ ಸಹಕಾರದಿಂದ ಸಂಸ್ಥೆ ಬೆಳೆದಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಅವರಿಗೆ ಭವಿಷ್ಯದಲ್ಲಿ ಉತ್ತಮ ಜೀವನ ಕಲ್ಪಿಸುವ ಗುರಿಯೊಂದಿಗೆ ಸಂಸ್ಥೆ ಮುನ್ನಡೆಯುತ್ತಿದೆ ಎಂದರು.
ಸಂಸ್ಥೆಯ ಟ್ರಸ್ಟಿ ಸಗುಣಾ ಸಿ ನಾೖಕ್, ಟ್ರಸ್ಟಿ ಡಾ. ಮುರಳೀಧರ ನಾೖಕ್, ಶಕ್ತಿ ಪಿಯು ಕಾಲೇಜು ಪ್ರಾಂಶುಪಾಲ ವೆಂಕಟೇಶಮೂರ್ತಿ ಎಚ್., ಶಕ್ತಿ ವಸತಿ ಶಾಲೆ ಪ್ರಾಂಶುಪಾಲ ರವಿಶಂಕರ್ ಹೆಗಡೆ, ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಯೋಜಕಿ ಪೆಟ್ರಿಶಿಯಾ ರೋಸ್ ಪಿಂಟೊ ಉಪಸ್ಥಿತರಿದ್ದರು. ಶಕ್ತಿ ಶಿಕ್ಷಣ ಟ್ರಸ್ಟ್ ಸಲಹೆಗಾರ ರಮೇಶ್ ಕೆ. ಸ್ವಾಗತಿಸಿದರು. ಉಪನ್ಯಾಸಕಿ ಅಕ್ಷತಾ ವಂದಿಸಿದರು. ಉಪನ್ಯಾಸಕಿ ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.